ಬುಧವಾರ, ಜನವರಿ 29, 2020

ಅಲ್ಲೊಂದು ತೆರೆದ ಕಣ್ಣು ಇದ್ದೇಇರುತ್ತದೆ ನೀನು ನಿದ್ರಿಸುತ್ತಿದ್ದರೂ ಕೂಡ.

ಯಾವುದೋ ಅಶಾಂತಿಯಲ್ಲಿ
ನೀನು ಬೇಕೆನಿಸಿ
ನಿನ್ನ ಕಾಣುವವರೆಗೂ
ಅಳುವನ್ನ ಕಟ್ಟಿ ಹಿಡಿಯುತ್ತೇನೆ.

ಅಳುವಿನ ಕಟ್ಟೆ ಒಡೆಯುವಂತಾದರೆ
ಭಾರದ ಹೆಜ್ಜೆಗಳಲ್ಲಿ
ಕಡಲನ್ನು ಸುತ್ತು ಹೊಡೆಯುತ್ತ
ಹಿಮ್ಮಡಿ ಸವೆಸಿಕೊಂಡು
ನಿನ್ನ ಎತ್ತರವನ್ನು ಕಂಡು
ಕಣ್ಣು ಮಿಟುಕಿಸಿ ಹಾದುಹೋಗುತ್ತೇನೆ.

ಬೆಳಕಿಲ್ಲದ ಮಬ್ಬು ದಿನಗಳಲ್ಲಿ
ಹೂವುಗಳು ಬಿರಿಯಲಾಗದೇ
ಕೊರಗುವಾಗ
ನೀನಿರುವ ಮರಳ ಬೇಲೆ ಮಸುಕಾಗಿ
ನಾ ಓಡಿ ಬಂದು
ನಿನ್ನ ನೋಡಲು ನುಗ್ಗುತ್ತೇನೆ
ಅಲ್ಲೊಂದು ತೆರೆದ ಕಣ್ಣು ಇದ್ದೇಇರುತ್ತದೆ
ನೀನು ನಿದ್ರಿಸುತ್ತಿದ್ದರೂ ಕೂಡ.

ಅಳದೇ ಅಶಾಂತಿ ಕಳೆಯುವುದಿಲ್ಲ
ನಿನ್ನ ಕಾಣದೇ ಅಳಲಿಕ್ಕಾಗುವುದಿಲ್ಲ.


ಸೋಮವಾರ, ಜನವರಿ 20, 2020



ನನ್ನ ದ್ವಂದ್ವಗಳು ಮುನಿಸಿಕೊಂಡಿವೆ.

ಕಾಮವೋ ಪ್ರೇಮವೋ ತಿಳಿಯದ
ತೊಳಲಾಟಗಳು
ನಿನ್ನನ್ನೊಂದು ಧ್ಯಾನವೆಂಬಂತೆ
ಕಂಡುಕೊಂಡ ಮೇಲೆ
ನನ್ನ ದ್ವಂದ್ವಗಳು ಮುನಿಸಿಕೊಂಡಿವೆ.

ಹತ್ತಿರ ಬರುವುದೋ ಬಿಡುವುದೋ ಎಂಬ
ಅಜ್ಞಾತ ಬುದ್ಧಿಯ ಮೇಲೇ ಅನುರಾಗ
ಹುಟ್ಟಿದಾಗ
ನನ್ನ ದ್ವಂದ್ವಗಳು ಮುನಿಸಿಕೊಂಡಿವೆ.

ನಿನ್ನೆ ಕಂಡವನು
ಈಗ ಕಾಣುತ್ತಿರುವವನು
ನೀನೇ ಹೌದು ಎಂದು ಗೊತ್ತಾದಮೇಲೆ
ನನ್ನ ದಂದ್ವಗಳು ಮುನಿಸಿಕೊಂಡಿವೆ.

ನೀನು ಪದೇಪದೇ ಕಾಣಿಸಿಕೊಂಡಾಗ
ನೋಡುವುದೋ ಬಿಡುವುದೋ ಎನ್ನುವ
ಸಂಕಟವನ್ನು ಬದಿಗಿಟ್ಟು
ಕಣ್ಣರಳಿಸಿ ಖುಷಿಪಡುವ ನನ್ನಲ್ಲಿ
ದ್ವಂದ್ವಗಳು ಸತ್ತುಹೋಗಿವೆ.


ಮಂಗಳವಾರ, ಡಿಸೆಂಬರ್ 31, 2019

ಗಡಿಯಾರದ ಮುಳ್ಳುಗಳ ಮೇಲೆ
ದಿನದೂಡುವವರೆಲ್ಲ
ಒಂದಾಗಿದ್ದಾರೆ ಇಲ್ಲಿ
ಹೊತ್ತು ಕಳೆಯುತ್ತಿದೆ.

ಈ ಹೊತ್ತು ಮುಗಿಯುತ್ತಿದೆ
ಹಾಡಿನ ಕುಣಿತಕ್ಕೆ
ತೂಗಿಕೊಳ್ಳುತ್ತಿದ್ದಾರೆ
ಹೊತ್ತು ಕಳೆದುಹೋಗುತ್ತಿದೆ.

ಇದು ಯಾವುದೋ ಆಟದ
ಕೊನೆಯೂ ಆಗಿರದೆ
ಬುಡವೂ ಆಗಿರದೆ
ಮತ್ತೆ ಮತ್ತೆ ಗಿರಕಿ ಹೊಡೆಯುವ
ಹಿಗ್ಗುವ ಉತ್ಸವವೋ
ಕುಗ್ಗಿಸುವ ವಾಸ್ತವವೋ
ಎಂಬುದನ್ನು
ಯಾರೂ ಅರಿವಿನಲ್ಲಿ ಕಂಡುಕೊಳ್ಳುತ್ತಿಲ್ಲ.

ಒಂದಿಷ್ಟು ಜನ ಮತ್ತಿನ ಹಗುರದಲ್ಲಿ
ಮತ್ತೊಂದಿಷ್ಟು ಜನ ಮತ್ತಿನ ಭಾರದಲ್ಲಿ
ನಡು ಹೊತ್ತನ್ನೇ ಮರೆಯುತ್ತಿದ್ದಾರೆ.

ಈ ಹೊತ್ತು ಮುಗಿಯುತ್ತಿದೆ
ಹೊಸತೇನನ್ನೋ ಕಾಣುವ ಭ್ರಮೆಯಲ್ಲಿ.



ಗುರುವಾರ, ನವೆಂಬರ್ 28, 2019

Depression Episode - 1 Battle Symphony

Battle Symphony (Official Lyric Video) - Linkin Park - YouTube



Depression Epsiode- 1

ಖಿನ್ನತೆ ಕಾಡದವರು ಯಾರಿದ್ದಾರೆ. ಎಲ್ಲರೂ ಜೀವನದ ಒಂದಲ್ಲಾ ಒಂದು ಘಟ್ಟದಲ್ಲಿ ಕುಸಿದು ಕುಳಿತವರೇ. ಬಿದ್ದು ಮೇಲೇಳಲಾಗದೇ ಸೋಲೊಪ್ಪಿಕೊಂಡವರನ್ನು ಬದಿಗಿಡೋಣ. ಖಿನ್ನರಾಗಿ ಇನ್ನು ಸಾಧ್ಯವಿಲ್ಲ ಎಂದು ಕೈಚೆಲ್ಲಿದವರನ್ನು ಉಳಿಸುವುದು ಯಾವುದೋ ಮಾಯೆಯೇ ಆಗಿರಬಹುದು. ಆ ಮಾಯೆ ಯಾವುದೇ ರೂಪದಲ್ಲಿರಬಹುದು. ಅಂತದ್ದೇ ಮಾಯೆಗಳಲ್ಲೊಂದು ಈ "Battle Symphony" ಎಂಬ ಹಾಡು. Inspirational Songಗಳು pop ಸಂಗೀತದಲ್ಲಿ ಸರ್ವೇಸಾಮನ್ಯವಾಗಿದ್ದರೂ, ಈ ಹಾಡಿನ ಸೌಂದರ್ಯವೇ ಬೇರೆ.
2017ರಲ್ಲಿ ಬಿತ್ತರಗೊಂಡ Linkin Park Band "One More Light" ಎನ್ನುವ ಆಲ್ಬಮ್ಮಿನ ಹಾಡು ಇದು. Linkin Park ಡಿಸ್ಕೋಗ್ರಫ಼ಿಯಲ್ಲೇ ಇದೊಂದು ವಿಶಿಷ್ಠವಾದ ಹಾಡು. ಹಾಡು ಪೂರ್ತಿಯಾಗಿ pop sound ನಿಂದ ದೂರವಾದಂತೆ ಕಂಡರೂ ಒಂದು ನೂತನವಾದ ಭಾವನೆಯನ್ನು ಹುಟ್ಟಿಸುತ್ತದೆ. ಬಹಳಷ್ಟು ಹಾಡುಗಳು ಆಳವಾದ ಅರ್ಥವನ್ನು ಕಟ್ಟಿಕೊಂಡಿರುವುದಿಲ್ಲ. ಆದರೆ ಇದು ಅಂತಹ ಸಂಗೀತವನ್ನು ಸ್ಪರ್ಧಿಸುವಂತಿದೆ. ಒಂದು ಸಕಾರಾತ್ಮಕ ಸಂದೇಶ, ಆಳವಾದ ಭಾವನೆಗಳನ್ನು ಒಳಗೊಂಡಿರುವ ಇದು ಸೋಲನ್ನೇ ಸೋಲಿಸಲು ಹೊರಡೋಣ ಎನ್ನುವಷ್ಟು ಸ್ಪೂರ್ತಿದಾಯಕವಾಗಿದೆ. ಹಾಡಿನ ಸ್ವರ, ಹಾಡುಗನ ಕಂಠ, ಹಿನ್ನೆಲೆ ಸಂಗೀತ ಮತ್ತು chorus ಹಾಡಿನ ಭಾವವನ್ನು ಮತ್ತೂ ಹರಿತಗೊಳಿಸಿವೆ. Lyrics Video ಹಾಡಿನ ಚಂದವನ್ನು ಹೆಚ್ಚಿಸಿದೆ.
“I got a long way to go" ಎಂದು ಪ್ರಾರಂಭವಾಗುವ ಹಾಡು ಭವಿಷ್ಯದ ಬಗ್ಗೆ ಇಡುವ ಆಶೆಯಾಗಿದೆ."if my armour breaks" ಎನ್ನುವಾಗ ಹಾಡುಗಾರನ ಧ್ವನಿಯಲ್ಲಿ ಕಾಣುವ ರೋಧನೆ ಮತ್ತು "I’ll fuse it back together" ಎನ್ನುವಾಗಿನ ಆವೇಶ ಕೇಳುಗನ ಎದೆಯಲ್ಲಿ ಸಂಕಟವನ್ನು ಹುಟ್ಟಿಸುತ್ತದೆ. "but the sound of your voice puts the pain in reverse" ಎನ್ನುವ ಸಾಲುಗಳು ಬಹಳ ಆಪ್ತವೆನ್ನಿಸುತ್ತವೆ. ಇಲ್ಲೊಂದು ವಿಶೇಷವೆಂದರೆ – ಹಾಡು ಎಲ್ಲ ನೋವುಗಳನ್ನು ತೋಡಿಕೊಳ್ಳುತ್ತ ಆ ವೇದನೆಗಳನ್ನು ಉಪಶಮನಗೊಳಿಸುವ ಬಗೆಯನ್ನೂ ವಿವರಿಸುತ್ತದೆ. ಹಾಡಿನ ಪ್ರತೀ ಸಾಲೂ ಇಷ್ಟವಾಗುವಂತಿದೆ;  ‘battle symphony’ ಎನ್ನುವ ರೂಪಕ ಸಹ . ಕೇಳಿನೋಡಿ......

Battle Symphony (Official Lyric Video) - Linkin Park - YouTube





ಗುರುವಾರ, ಅಕ್ಟೋಬರ್ 31, 2019

ವೃತ್ತದೊಳಗಿನ ಬೇರೆ ಬೇರೆ ಪರಿಧಿಗಳಲ್ಲಿ
ಸುತ್ತುತ್ತಿದ್ದೇವೆ ನಾವು
ಒಂದೇ ರಸ್ತೆಯ ಬೇರೆ ಬೇರೆ ಬದಿಗಳಲ್ಲಿ
ಒಂದೇ ನೀರಿನ ಬೇರೆ ಬೇರೆ ಹನಿಗಳಲ್ಲಿ
ನಾನು ಒಂಟಿಯಾಗಿ
ನೀನೂ ಒಂಟಿಯಾಗಿ
ತೊಡಕಿಲ್ಲದೆ ಜರುಗುವ
ಸಮಾರಂಭದಂತೆ
ನಾವು ನಮ್ಮ ಕಕ್ಷೆಗಳಲ್ಲೇ
ಕಳೆದುಹೋಗಿದ್ದೇವೆ.

ಈ ಊರಿನ ಬೇರೆಬೇರೆ ಗಲ್ಲಿಗಳನ್ನು
ಬೇರೆಬೇರೆ ಸಮಯಗಳಲ್ಲಿ ಸುತ್ತಿ
ಸುಸ್ತಾಗಿದ್ದೇವೆ
ನಾನು ಒಂಟಿಯಾಗಿ
ನೀನೂ ಕೂಡ ಒಂಟಿಯಾಗಿ
ಯಾವುದೋ ಮುಳ್ಳು ಬೇಲಿ
ಬದಿಯ ನೀಲಿ ಹೂವು ಕಂಡು
ಬೆರಗಾದಗಿದ್ದು ಕೂಡ
ಬೇರೆ ಬೇರೆ ಸಮಯದಲ್ಲೇ.

ಮುಗಿದುಹೋದ ಹಗಲಿನ ಕತ್ತಲಲ್ಲಿ
ನಡೆಯುವಾಗ ಎಡವಿ ಬಿದ್ದು
ಒಬ್ಬರಿಗೊಬ್ಬರು ಕೈಹಿಡಿದು
ಎಬ್ಬಿಸಿ ಸಂತೈಸಿ ಮಾತನಾಡಿಯೂ ಸಹ
ಬೇರೆಬೇರೆಯಾಗಿಯೇ ಉಳಿಯುತ್ತೇವೆ;
ಕತ್ತಲಿಗೇನುಗೊತ್ತು
ನಾವು ಒಬ್ಬರಿಗೊಬ್ಬರು ಮೋಹಿಸುವುದು
ನಮ್ಮ ಅಜ್ಞಾತ ಪ್ರೇಮವೂ
ನಮ್ಮನ್ನು ಕೂಡಿಸುವುದಿಲ್ಲ.


ಗುರುವಾರ, ಅಕ್ಟೋಬರ್ 24, 2019

ನನ್ನನ್ನೇ ನಾನು ತಳ್ಳಿಕೊಳ್ಳುವ ಆಳದಲ್ಲಿ
ನಿನ್ನ ಕಳೇಬರದ ಕುರುಹುಗಳಿವೆ.

ನಾನಾಗಿಯೇ ಸಿಕ್ಕಿಹಾಕಿಕೊಳ್ಳುವ
ಹೊರಬರಲಾಗದ ಇಕ್ಕಟ್ಟಿನಲ್ಲಿ
ನಿನ್ನ ಕೊನೆಯ ಉಸಿರಿನ ಪರಿಮಳ
ನನ್ನನ್ನು ಪೀಡಿಸುತ್ತದೆ.

ನೀನು ಇಲ್ಲದಿರುವುದಕ್ಕೆ
ಸಾಕ್ಷಿ ಎಂಬಂತೆ ನಾನು ಅಳುತ್ತಿರುತ್ತೇನೆ.

ನಿನ್ನ ಮರಣಪತ್ರದಲ್ಲಿ
ನನ್ನ ಹೆಸರೂ ಸೇರಿಸಿಕೊಳ್ಳಬೇಕೆನಿಸುತ್ತದೆ
ನನಗೆ ನಾನೇ ಸಾವನ್ನು ಬರೆದುಕೊಳ್ಳುತ್ತೇನೆ
ಮತ್ತೆ ಮತ್ತೆ ನನ್ನನ್ನು ನಾನೇ ತಳ್ಳಿಕೊಳ್ಳುತ್ತೇನೆ.

ಮತ್ತೆ ಮತ್ತೆ ಮೃತ್ಯುವಿನ ಕೈಹಿಡಿದು
ನನ್ನನ್ನು ಜೀವದ ಜೋಳಿಗೆಯಲ್ಲಿ
ಬಿಟ್ಟುಹೋಗುವ ಆಟದಲ್ಲಿ
ನಿನ್ನ ಕೈವಾಡವಿರಲಿಕ್ಕಿಲ್ಲ.

ನಾನು ಬದುಕಿರುವಷ್ಟು ದಿನವೂ
ನಿನ್ನ ನೆನಪೂ ಬದುಕಿರುತ್ತದೆ.


ಶುಕ್ರವಾರ, ಅಕ್ಟೋಬರ್ 18, 2019

ಪರಿಮಳದ ನಕಾಶೆ

ಪರಿಮಳದ ನಕಾಶೆಯ ಬಿಂದುವೊಂದರಲ್ಲಿ
ನಿಂತು ನಗುತ್ತಿದ್ದಾನೆ ಹುಡುಗ
ನನ್ನ ಹುಡುಕಾಟದ ಹತಾಶೆಯ ಕಂಡು.

ಆ ದಾರಿ ಈ ದಾರಿ ಎಂದು ನಾನು
ಮೂಗು ಅರಳಿಸಿಕೊಂಡು
ಚಲಿಸಿ ಚಲಿಸಿ ಸೋತು
ತಲುಪಲಾಗದ ಸ್ಥಳಗಳನ್ನೆಲ್ಲ
ಪಿಂಡಿ ಕಟ್ಟಿ ಒಗೆದರೆ ಹಿಡಿದುಕೊಳ್ಳುತ್ತಾನೆ
ಅವನು ಬಂದು.

ಪ್ರತೀ ಹಾದಿಯ ಪರಿಮಳವನ್ನೂ
ಅಳೆದು ರಚಿಸಿದ ನಕಾಶೆಯ
ಅವನು ಅಲ್ಲಗಳೆಯುತ್ತಾನೆ;
ಬೇಸತ್ತು ನಿಟ್ಟುಸಿರಿಟ್ಟು
ಅವನು ಕದಡುವ ಗಾಳಿ
ನಕಾಶೆಯ ಅಸ್ತಿತ್ವವನ್ನು ಹಾಳುಮಾಡುತ್ತದೆ.

ನಾನು ಸದಾ ಹುಡುಕುವ ಅವನೂ
ಒಂದು ಪರಿಮಳವೇ ಆಗಿದ್ದಾನೆ.

ನಕಾಶೆಯ ಒಂದೇ ಬಿಂದುವಿನಲ್ಲಿ
ಅವನನ್ನು ಹಿಡಿದಿಡಲಾಗುವುದಿಲ್ಲ;
ಬಿಡದೇ ಹುಡುಕುತ್ತಿರಬೇಕು
ಅವನ ಬಿಡರಾವನ್ನು
ಅವನನ್ನು ಹುಡುಕದೇ ಇರಲಾಗುವುದಿಲ್ಲ.